ಭಾರತದ ಕರ್ನಾಟಕ ರಾಜ್ಯದ ಕಾವೇರಿನದಿಗೆ ಅದರ ಬಲದಂಡೆಯಲ್ಲಿ ಬಂದು ಸೇರುವ ಉಪನದಿಗಳಲ್ಲೊಂದು. ಕೊಡಗಿನ ದಕ್ಷಿಣಭಾಗದಲ್ಲಿರುವ ಬ್ರಹ್ಮಗಿರಿಯ ದೇವದಾಸಿಬೆಟ್ಟದ ಮುನಿಕಾಡು ಅರಣ್ಯ ಪ್ರದೇಶದಲ್ಲಿ ಈ ನದಿ ಉಗಮಿಸುತ್ತದೆ.  ನದಿಯ ಹರಿವಿನ ಒಟ್ಟು ಉದ್ದ ಸು. 180 ಕಿಮೀ. ಲಕ್ಷ್ಮಣತೀರ್ಥ ಹಾಗೂ ಇದರೊಡನೆ ಸಂಗಮಿಸುವ ರಾಮತೀರ್ಥ ಮತ್ತು ಕೆರೆಹೊಳೆ ನದಿಗಳು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆಗ್ನೇಯ ಭಾಗಕ್ಕೆ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತವೆ. ಬ್ರಹ್ಮಗಿರಿಯಿಂದ ತೀವ್ರ ಇಳಕಲು ನೆಲೆಯಲ್ಲಿ ಹರಿಯುವ ಈ ನದಿ ಬಹುಮಟ್ಟಿಗೆ ಗೋಡೆಯಂಥ ಭೂಪ್ರದೇಶದೊಡನೆ ಸಂಘಟಿಸುತ್ತದೆ. ಈ ಕಾರಣದಿಂದ ಈ ಎಡೆಯ ಪ್ರಾಕೃತಿಕ ದೃಶ್ಯ ರಮಣೀಯವಾಗಿದೆ. ಈ ಭಾಗದ ಇರ್ಪು ಎಂಬ ಸ್ಥಳದಲ್ಲಿ ಲಕ್ಷ್ಮಣತೀರ್ಥದ ಒಂದು ಜಲಪಾತ ವಿದೆ.  ಆಳವಾದ ಮರಳಿನ ತಳವನ್ನು ಹೊಂದಿರುವ ಮಣ್ಣಿನ ಅಥವಾ ಜೇಡಿಮಣ್ಣಿನ ದಡಗಳನ್ನು ಹೊಂದಿರುವ ಈ ನದಿಯ ಇಕ್ಕೆಲಗಳಲ್ಲಿ ದಟ್ಟವಾದ ಅರಣ್ಯ (ಬೊಂಬಿನ ಮೆಳೆ) ಕಾಣಬರುತ್ತದೆ.  ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರಿನ ದಕ್ಷಿಣಕ್ಕೆ ಸು.3ಕಿಮೀ ದೂರದಲ್ಲಿ ಇದು ಮೈಸೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಮುಂದೆ ಹನಗೂಡು, ಹುಣಸೂರು ಮತ್ತು ಕಟ್ಟೆಮಳಲವಾಡಿಯ ಮೂಲಕ ಹರಿದು ಕೃಷ್ಣರಾಜ ನಗರ ತಾಲ್ಲೂಕನ್ನು ಪ್ರವೇಶಿಸಿ ಸಾಗರಕಟ್ಟೆ ಬಳಿ ಕಾವೇರಿ ನದಿಯೊಡನೆ ಸಂಗಮಿಸುತ್ತದೆ.  ಈ ನದಿಯ ಉದ್ದಕ್ಕೂ ಹಲವು ಅಣೆಕಟ್ಟುಗಳನ್ನು ಕಟ್ಟಿ ನೀರಾವರಿ ಸೌಲಭ್ಯವನ್ನು ದೊರಕಿಸಿಕೊಳ್ಳಲಾಗಿದೆ. ಕೊಡಗಿನಲ್ಲಿ ಲಕ್ಷ್ಮಣತೀರ್ಥ ಜಲಾಶಯವನ್ನು 1893ರಲ್ಲಿ ರಚಿಸಲಾಯಿತು. ಇದರಿಂದ ಸು. 116.54 ಚ.ಕಿಮೀ ಭೂಮಿಗೆ ನೀರು ಪೂರೈಕೆಯಾಗುತ್ತದೆ.  ಮೈಸೂರು ಜಿಲ್ಲೆಯಲ್ಲಿ ಹನಗೂಡು, ರಾಮೇನಹಳ್ಳಿ, ಕಟ್ಟೆಮಳಲವಾಡಿ, ಹಗರನಹಳ್ಳಿ, ಸಾಗರಕಟ್ಟೆ ಮತ್ತು ಶಿರಿಯೂರು ಈ ಸ್ಥಳಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.  ಸಾಗರಕಟ್ಟೆ ಅಣೆಕಟ್ಟು ದಿವಾನ್ ಪೂರ್ಣಯ್ಯನವರು ಕಟ್ಟಿಸಿದ್ದು.  
 
(ಡಿ.ಸಿ.ಜೆ.;ಪಿ.ಜಿ.ಡಿ.;ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ